ಭದ್ರಾವತಿ
ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಹೋಬಳಿ ಹಾಗೂ ಇವುಗಳ ಆಡಳಿತ ಕೇಂದ್ರ ಮತ್ತು ಕೈಗಾರಿಕಾನಗರ. ಭದ್ರಾವತಿ ತಾಲ್ಲೂಕನ್ನು ಪಶ್ಚಿಮದಲ್ಲಿ ಶಿವಮೊಗ್ಗ, ದಕ್ಷಿಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು, ಉತ್ತರವಾಯುವ್ಯದಲ್ಲಿ ಹೊನ್ನಾಳಿ, ಈಶಾನ್ಯದಲ್ಲಿ ಚನ್ನಗಿರಿ ತಾಲ್ಲೂಕುಗಳು ಸುತ್ತುವರಿದಿದೆ. 161 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 687 ಚಕಿಮೀ. ಜನಸಂಖ್ಯೆ 3,38,611 (2001).

	ಭದ್ರಾನದಿ ತಾಲ್ಲೂಕಿನ ದಕ್ಷಿಣದಲ್ಲಿ ಕಾರೇಹಳ್ಳಿಯ ಬಳಿ ಪ್ರವೇಶಿಸಿ ಉತ್ತರಾಭಿಮುಖವಾಗಿ ಹರಿಯುತ್ತದೆ. ಮುಂದೆ ಕೂಡಲಿಬಳಿ ತುಂಗಾನದಿಯನ್ನು ಕೂಡಿಕೊಂಡು ಸ್ವಲದೂರ ಭದ್ರಾವತಿ-ಶಿವಮೊಗ್ಗ ತಾಲ್ಲೂಕುಗಡಿಯಾಗಿ ತುಂಗಭದ್ರ ಹರಿಯುವುದು, ಭದ್ರಾಯೋಜನೆಯ ಎಡನಾಲೆ ಮತ್ತು ವಿದ್ಯುದಾಗಾರ ಈ ತಾಲ್ಲೂಕಿಗೆ ಸೇರಿವೆ.

	ತಾಲ್ಲೂಕು ಶಿವಮೊಗ್ಗ ಜಿಲ್ಲೆಯ ಪೂರ್ವಭಾಗದ ಬಯಲು ಪ್ರದೇಶದಲ್ಲಿದ್ದು ಹವೆ ಹಿತಕರವಾಗಿದೆ. ವಾರ್ಷಿಕ ಸರಾಸರ ಮಳೆ 1090.57 ಮಿಮೀ (1971). ಭದ್ರಾ ಮತ್ತು ತುಂಗಭದ್ರಾ ಜಲಾನಯನ ಪ್ರದೇಶಗಳು ತಾಲ್ಲೂಕಿನ ಪಶ್ಚಿಮ ಭಾಗದಲ್ಲಿದ್ದು ಸಾಗುವಳಿಗೆ ಯೋಗ್ಯವಾಗಿವೆ. ಮುಖ್ಯ ಬೆಳೆಗಳು ಬತ್ತ, ರಾಗಿ, ಜೋಳ, ಕಬ್ಬು, ತೆಂಗು, ಅಡಕೆ.

	ಕೈಗಾರಿಕೆಯಲ್ಲಿ ಈ ತಾಲ್ಲೂಕು ಮುಂದುವರಿದಿದ್ದು ಕಬ್ಬಿಣ, ಉಕ್ಕು ಕಾರ್ಖಾನೆ, ಸಿಮೆಂಟ್ ಮತ್ತು ಕಾಗದದ ಕಾರ್ಖಾನೆಗಳಿವೆ. ಬತ್ತ ಮತ್ತು ತೈಲ ಗಿರಣಿಗಳು, ಖಾದಿ ಗ್ರಾಮೋದ್ಯೋಗ ಹಾಗೂ ಗೃಹಕೈಗಾರಿಕೆಗಳಿವೆ. ಭದ್ರಾವತಿ-ಕೆಮ್ಮಣ್ಣುಗುಂಡಿ, ಭದ್ರಾವತಿ-ಜೋಳದಾಳು ಮತ್ತು ಭದ್ರಾವತಿ-ಅಗಸನಹಳ್ಳಿ ಟ್ರಾಮ್ ಮಾರ್ಗಗಳ ಮೂಲಕ ಕಾರ್ಖಾನೆಗೆ ಅದುರಿನ ಸಾಗಣೆ ನಡೆಯುತ್ತದೆ. ರಸ್ತೆ, ರೈಲು ಸಂಪರ್ಕ, ವಿದ್ಯುತ್, ದೂರವಾಣಿ, ಶಾಲಾ ಕಾಲೇಜುಗಳ ಸೌಲಭ್ಯ ಮುಂತಾದವುಗಳಿವೆ.

	ಭದ್ರಾವತಿ ನಗರ ಬೆಂಗಳೂರು-ಹೊನ್ನಾವರ ರಸ್ತೆ ಮತ್ತು ಬೀರೂರು-ತಾಳಗುಪ್ಪ ರೈಲುಮಾರ್ಗದಲ್ಲಿ ಭದ್ರಾನದಿಯ ಎರಡು ದಂಡೆಗಳ ಮೇಲೂ ಹಬ್ಬಿಕೊಂಡಿದೆ. ಶಿವಮೊಗ್ಗ ನಗರದ ಆಗ್ನೇಯದಲ್ಲಿ 18 ಕಿಮೀ ದೂರದಲ್ಲಿದೆ. ಜನಸಂಖ್ಯೆ 1,60,392 (2001). ಹಿಂದೆ ಸಣ್ಣ ಕುಲುಮೆಗಳಲ್ಲಿ ಕಬ್ಬಿಣದ ಅದುರುಗಳನ್ನು ಕರಗಿಸುತ್ತಿದ್ದುದರಿಂದ ಆ ಸ್ಥಳಕ್ಕೆ ಬೆಂಕಿಪುರ ಎಂದು ಹೆಸರಿದ್ದಿತು. ಭದ್ರಾವತಿ ನಗರ ಸ್ಥಾಪಿತವಾಗಿರುನ ಕಡೆ ಭದ್ರಾನದಿ ಬಾಗಿ ಹರಿಯುವುದರಿಂದ ಅದಕ್ಕೆ ವಂಕಿಯಪುರ ಅಥವಾ ಬಂಕಿಯಪುರ ಎಂಬ ಹೆಸರಾಯಿತೆಂದು ತಿಳಿದುಬರುತ್ತದೆ. ಶಿವಮೊಗ್ಗೆಯ ಕ್ರಿ.ಶ. 1413ರ ಶಾಸನವೊಂದರ ಪ್ರಕಾರ ದುಮ್ಮಿ ಮತ್ತು ಬಾನೂರು ನಾಡುಗಳನ್ನು ಆಳುತ್ತಿದ್ದ ಯರೆಲಕ್ಕನಾಯಕ ಬಂಕಿಯಪುರದ ಬಳಿಯ ದಟ್ಟ ಅಡವಿಯನ್ನು ಕಡಿದು ಅಲ್ಲಿ ನರಸಿಂಹಪುರ ಮತ್ತು ಲಕ್ಷ್ಮೀಪುರ ಎಂಬ ಊರುಗಳನ್ನು ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಆದರೆ ಈ ಊರು ಅದಕ್ಕೂ ಪ್ರಾಚೀನವಾದದ್ದು. ಹಳೆಯ ಊರು ಎಂದು ಕರೆಯುವ ಭಾಗ ಹೊಯ್ಸಳರ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತೆಂದು ಇಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯ ಆ ಕಾಲದ ಒಂದು ಸುಂದರ ವಾಸ್ತುಕೃತಿಯೆಂದೂ ಹೇಳಲಾಗಿದೆ.

	ಕೈಗಾರಿಕೆಗಳ ಸ್ಥಾಪನೆಯಿಂದ ಭದ್ರಾವತಿ ಅರ್ಧ ಶತಮಾನದೊಳಗೆ ದೊಡ್ಡನಗರವಾಗಿ ಅಭಿವೃದ್ಧಿಗೊಂಡಿತು. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಯ ಕಬ್ಬಿಣದ ಹೇರಳ ಅದುರನ್ನು ಬಳಸಿಕೊಂಡು ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಯೋಜನೆ 1918ರಲ್ಲಿ ರೂಪುಗೊಂಡು ಕಾರ್ಖಾನೆಯ ಕಟ್ಟಡ ಹಾಗೂ ಯಂತ್ರೋಪಕರಣಗಳು 1922ರಲ್ಲಿ ಸಿದ್ಧವಾಗಿ, ಮಾರ್ಚ್ 1923ರಲ್ಲಿ ಕೆಲಸ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಟಾಟಾ ಐರನ್ ಅಂಡ್ ಸ್ವೀಲ್ ಕಂಪೆನಿ ಹಾಗೂ ಭದ್ರಾವತಿ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಗಳ ಮ್ಯಾನೇಜಿಂಗ್ ಏಜೆಂಟರಾಗಿದ್ದರು. 1924ರ ಹೊತ್ತಿಗೆ ಆಗಿನ ಮೈಸೂರು ಸಂಸ್ಥಾನದ ಸರ್ಕಾರ ಕಾರ್ಖಾನೆಯನ್ನು ಪೂರ್ಣ ವಹಿಸಿಕೊಂಡಿತು. ಈಗ ಕಾರ್ಖಾನೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಮಾಲೀಕತ್ವದಲ್ಲಿದೆ. ಭದ್ರಾವತಿಯಲ್ಲಿ ಮೈಸೂರು ಕಾಗದದ ಕಾರ್ಖಾನೆ 1936ರಲ್ಲಿ ಪ್ರಾರಂಭವಾಯಿತು. ಅದರ ಕಾರ್ಮಿಕರ ವಾಸಕ್ಕಾಗಿ ಹೊಸ ಬಡಾವಣೆಯೊಂದು ಪೇಪರ್ ಟೌನ್ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು. ಸಿಮೆಂಟ್ ಕಾರ್ಖಾನೆ ಸಹ ಈ ನಗರದಲ್ಲಿದೆ. ಭದ್ರಾವತಿ ಒಂದು ಮುಖ್ಯ ರೈಲು ನಿಲ್ದಾಣ. ಇಲ್ಲಿಂದ ಶಿವಮೊಗ್ಗ, ತರೀಕೆರೆ ಚನ್ನಗಿರಿ, ಹೊನ್ನಾಳಿ, ತೀರ್ಥಹಳ್ಳಿ ಮೊದಲಾದ ಕಡೆಗಳಿಗೆ ರಸ್ತೆಗಳಿವೆ. ಪ್ರೌಢಶಾಲೆಗಳು, ಕಾಲೇಜುಗಳು, ತಾಂತ್ರಿಕ ತರಬೇತಿ ಮತ್ತು ಕೈಗಾರಿಕಾ ತರಬೇತಿ ಶಾಲೆಗಳೂ ಇವೆ. ನಗರದ ಇತರೆಲ್ಲ ಸೌಲಭ್ಯಗಳೊಂದಿಗೆ ಈ ಕೈಗಾರಿಕಾ ನಗರ ದಿನೇ ದಿನೇ ಬೆಳೆಯುತ್ತಿದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ